ರೌಲತ್
(1919). ಭಾರತದ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕಲು ಬ್ರಿಟಿಷ್ ಸರ್ಕಾರ ಜಾರಿಗೆ ತಂದ ಒಂದು ಕಾನೂನು.  ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಜಾರಿಯಲ್ಲಿದ್ದ “ಡಿಫೆನ್ಸ್ ಆಫ್ ಇಂಡಿಯನ್ ಆಕ್ಟ್”ನ (ಭಾರತದ ಭದ್ರತಾ ಕಾಯಿದೆ) ಅವಧಿ ಮುಗಿಯುತ್ತಾ ಬಂದಿತು.  ಭಾರತದಲ್ಲಿ ವಿನಾಶಕಾರಿ ಚಟುವಟಿಕೆಗಳ ಬಗ್ಗೆ ವಿಚಾರಣೆ ನಡೆಸಲು ಸರ್ಕಾರ ಜಸ್ಟಿಸ್ ಎಸ್.ಎ.ಟಿ. ರೌಲತ್ ನೇತೃತ್ವದ ಒಂದು ವಿಚಾರಣಾ ಆಯೋಗ ಅಥವಾ ರಾಜದ್ರೋಹ-ನಿರ್ಬಂಧ ಆಯೋಗವನ್ನು 1917 ಡಿಸೆಂಬರ್‍ನಲ್ಲಿ ನೇಮಿಸಿತು.  ಇದು 1918 ಏಪ್ರಿಲ್ 15ರಂದು ತನ್ನ ವರದಿ ಸಲ್ಲಿಸಿ, ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕಲು ಸರ್ಕಾರಕ್ಕೆ ವಿಶೇಷ ಅಧಿಕಾರ ಕೊಡಬೇಕೆಂದು ಶಿಫಾರಸ್ಸು ಮಾಡಿತು.  ಅದರಂತೆ ಈ ಮಸೂದೆ 1919 ಫೆಬ್ರವರಿ 6ರಂದು ಜಾರಿಗೆ ಬಂದಿತಲ್ಲದೆ, ಇದಕ್ಕೆ ಆಯೋಗದ ಅಧ್ಯಕ್ಷ ರೌಲತ್‍ನ ಹೆಸರನ್ನೆ ಇಡಲಾಯಿತು. ರಾಜಕೀಯ ಹಿಂಸೆ, ಕ್ರಾಂತಿಕಾರಿ ಚಟುವಟಿಕೆಗಳನ್ನು ದಮನ ಮಾಡಲು ಕಾರ್ಯಾಂಗಕ್ಕೆ ಹೆಚ್ಚಿನ ಅಧಿಕಾರವನ್ನು ಕೊಡಲಾಯಿತು. ಯಾವುದೇ ವಿಚಾರಣೆ ಇಲ್ಲದೆ ಕ್ರಾಂತಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸಲು ಇದರಲ್ಲಿ ಅವಕಾಶವಿತ್ತು.  ಈ ಮಸೂದೆ ಪ್ರಕಾರ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಸಭೆ ಸೇರುವಂತಿರಲಿಲ್ಲ. ಇದು ಭಾರತೀಯರ  ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ದಮನ ಮಾಡಿತು. ಅನುಮಾನ ಬಂದ ವ್ಯಕ್ತಿಯನ್ನು ನ್ಯಾಯಾಲಯದ ವಾರೆಂಟ್ ಇಲ್ಲದೆ ಬಂಧಿಸುವ ಅಧಿಕಾರವಿತ್ತು. ಬಂಧಿತ ವ್ಯಕ್ತಿ ನ್ಯಾಯವಾದಿಯ ಸಹಾಯವಿಲ್ಲದೆ ತನ್ನ ಪರ ತಾನೇ ವಾದಿಸಬೇಕಿತ್ತು.  ಅಲ್ಲದೆ ಸರ್ಕಾರದ ವಿರುದ್ಧ ಯಾವುದೇ ರೀತಿಯ ಸಾಹಿತ್ಯ ರಚಿಸಿದ್ದರೆ ಎರಡು ವರ್ಷ ಕಠಿಣ ಶಿಕ್ಷೆ ವಿಧಿಸಲು ಅವಕಾಶವಿತ್ತು.  ರಾಜಕೀಯ ವಿರೋಧಿಗಳನ್ನು ರಹಸ್ಯ ವಿಚಾರಣೆಗೆ ಗುರಿಪಡಿಸಿ ಯಾವುದೇ ರೀತಿಯ ಮೇಲ್ಮನವಿಗೂ ಅವಕಾಶ ನೀಡದೆ, ಮರಣದಂಡನೆ ವಿಧಿಸುವ ಅಧಿಕಾರ ಸರ್ಕಾರಕ್ಕಿತ್ತು. ಯುದ್ಧ ಕಾಲದ ಎಲ್ಲ ನಿರ್ಬಂಧಗಳನ್ನು ಮುಂದುವರಿಸಿಕೊಂಡು ಹೋಗುವ, ಪತ್ರಿಕಾ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕುಗೊಳಿಸುವ ವಿಧಿಗಳು ಈ ಕಾಯ್ದೆಯಲ್ಲಿದ್ದುವು.

	ಈ ಕರಾಳ ಮಸೂದೆಯನ್ನು ಶಾಸಕಾಂಗದ ಎಲ್ಲ ಪ್ರತಿನಿಧಿಗಳು ಕಟುವಾಗಿ ವಿರೋಧಿಸಿದರು. ಸಾಮಾನ್ಯ ಮೂಲಭೂತಹಕ್ಕು, ನಾಗರಿಕ ಸೌಲಭ್ಯ ಹಾಗೂ ರಾಷ್ಟ್ರೀಯ ಚಳವಳಿಯ ಮೇಲೆ ದಮನಕಾರಿ ನೀತಿ ಹೊಂದಿದ್ದ ಈ ಕಾಯ್ದೆಯ ವಿರುದ್ಧ ಗಾಂಧೀ ನೇರ ಹೋರಾಟಕ್ಕಿಳಿದರು.  ಜನರನ್ನು ಸಂಘಟಿಸಿ, ಸತ್ಯಾಗ್ರಹ ಸಮಿತಿ ರಚಿಸಿ, ಕಾಯ್ದೆ ಹಿಂತೆಗೆದುಕೊಳ್ಳುವಂತೆ ಸರ್ಕಾರ ಹಾಗೂ ವೈಸ್‍ರಾಯ್‍ಗೆ ಒತ್ತಡ ಹೇರಿದರು (1919).

ಗಾಂಧೀ, ಡಿ.ಎ. ವಾಚಾ, ಸುರೇಂದ್ರನಾಥ ಬ್ಯಾನರ್ಜಿ, ತೇಜ್ ಬಹದ್ದೂರ್ ಸಪ್ರು, ಶ್ರೀನಿವಾಸ ಶಾಸ್ತ್ರಿ ಮುಂತಾದ 15 ಅಧಿಕಾರೇತರ ಕೌನ್ಸಿಲರ್‍ಗಳು ಇದನ್ನು ವಿರೋಧಿಸಿ ಹರತಾಳ ಹಾಗೂ ಸತ್ಯಾಗ್ರಹ ಮಾಡಲು ನಿರ್ಧರಿಸಿದರು.  1919 ಮಾರ್ಚ್ 30 ರಂದು ರಾಷ್ಟ್ರಾದ್ಯಂತ ವ್ಯಾಪಾರ ವಹಿವಾಟನ್ನು ನಿಲ್ಲಿಸಿ ಒಂದು ದಿನ ಉಪವಾಸ ಮತ್ತು ಪ್ರಾರ್ಥನೆ ಮಾಡಲು ಕರೆಕೊಟ್ಟರು. ಹರತಾಳವನ್ನು ಏಪ್ರಿಲ್ 6ಕ್ಕೆ ಮುಂದೂಡಲಾಯಿತು. ಮಾರ್ಚ್ 20 ರಂದು ಹಿಂದು-ಮುಸ್ಲಿಮ್ ಮೆರವಣಿಗೆ ಮೇಲೆ ಪೊಲೀಸರು ಗುಂಡು ಹಾರಿಸಿದಾಗ ಆರ್ಯ ಸಮಾಜದ ಸ್ವಾಮಿ ಶ್ರದ್ಧಾನಂದರು ಗುಂಡಿಗೆ ಬಲಿಯಾದರು.  ಗಾಂಧೀಯವರ ನಿಷೇಧಿತ ಹಿಂದ್ ಸ್ವರಾಜ್ ಮತ್ತು ಸತ್ಯಾಗ್ರಹ ಕೃತಿಗಳನ್ನು ಸರೋಜಿನಿ ನಾಯ್ಡು ಮಾರಾಟ ಮಾಡಿದರು. ನಿಷೇಧಿತ ಸಾಹಿತ್ಯವನ್ನು ಪಡೆದ ತಪ್ಪಿಗೆ ಹಲವರು ದಸ್ತಗಿರಿಯಾದರಲ್ಲದೆ, ಏಪ್ರಿಲ್ 9ರಂದು ಗಾಂಧೀಯವರನ್ನು ಬಂಧಿಸಲಾಯಿತು. ಇದರಿಂದ ಬಾಂಬೆ, ಅಹಮದಾಬಾದ್, ನಾಡಿಯಾ, ಪಂಜಾಬ್‍ಗಳಲ್ಲಿ ಗಂಭೀರ ಸ್ಥಿತಿ ನಿರ್ಮಾಣವಾಯಿತು.  ಪಂಜಾಬ್ ಈ ಕಾಯ್ದೆಯನ್ನು 1919 ಏಪ್ರಿಲ್ 10ರಂದು ತೀವ್ರವಾಗಿ ಪ್ರತಿಭಟಿಸಿದಾಗ ಕಾಂಗ್ರೆಸ್‍ನ ಸತ್ಯಪಾಲ್ ಹಾಗೂ  ಸೈಪುದ್ದೀನ್ ಕಿಚ್ಲು ರವರನ್ನು ಸರ್ಕಾರ ಬಂಧಿಸಿ ಗಡಿಪಾರು ಮಾಡಿತು.  ಈ ಬಂಧನ ವಿರೋಧಿಸಿ ಸಾರ್ವಜನಿಕರು ಏಪ್ರಿಲ್ 13 ರಂದು ಜಲಿಯನ್‍ವಾಲಾಬಾಗ್‍ನಲ್ಲಿ ಸಭೆ ಸೇರಿದಾಗ ಜನರಲ್ ಮೈಕಲ್ ಡೈಯರ್ ಜನರ ಮೇಲೆ ರೌಲತ್ ಕಾಯ್ದೆ ಅನ್ವಯ ಅಮಾನುಷವಾಗಿ ಗುಂಡು ಹಾರಿಸಿದ. ಆಗ 379 ಜನರು ಅಸು ನೀಗಿದರಲ್ಲದೆ  1000ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ಕಾಯ್ದೆ ಜಲಿಯನ್‍ವಾಲಾಬಾಗ್ ದುರಂತಕ್ಕೆ ಕಾರಣವಾಯಿತು.  ತರುವಾಯ ಎಚ್ಚೆತ್ತ ಬ್ರಿಟಿಷ್ ಸರ್ಕಾರ ಈ ಕಾಯ್ದೆಯನ್ನು ನಿಲ್ಲಿಸಿತು.
	(ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ